ಪ್ರೇಮ್ ಪಿಕ್ಚರ್ಸ್ ಅವರ ರಕ್ಷಿತಾ ಪ್ರೇಮ್ ನಿರ್ಮಾಣದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ೧೦೦ನೇ ಚಿತ್ರ ’ಜೋಗಯ್ಯ’ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹುಬ್ಬಳ್ಳಿ, ಕಾರವಾರ, ಹೃಷಿಕೇಶ ಸ್ಥಳಗಳಲ್ಲಿ ಚಿತ್ರೀಕರಣ ಪೂರೈಸಿ ಇದೀಗ ’೩ಡಿ’ ಹಾಡಿನ ಚಿತ್ರೀಕರಣಕ್ಕೆ ಚಿತ್ರದುರ್ಗದಿಂದ ಪ್ರಾರಂಭಿಸಿ ಅನೇಕ ಸ್ಥಳಗಳಲ್ಲಿ ೬೦೦ಕ್ಕೂ ಹೆಚ್ಚು ಸಹಾಯಕರೊಂದಿಗೆ ವಿಶಿಷ್ಟ ರೀತಿಯಲ್ಲಿ ಸಜ್ಜಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಪ್ರಥಮ ಬಾರಿಗೆ ’೩ಡಿ’ ಎಫೆಕ್ಟ್ನಲ್ಲಿ ಸಿದ್ಧಗೊಳ್ಳುತ್ತಿರುವ ಈ ಹಾಡಿಗೆ ಕೋಟಿಗೂ ಹೆಚ್ಚು ಹಣ ಖರ್ಚಾಗುತ್ತಿದ್ದು ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡುವುದು ಎಂದು ’ಜೋಗಯ್ಯ’..........ದಿ ಲೆಜೆಂಡ್ ಆಫ್ ಅಂಡರ್ವರ್ಲ್ಡ ಚಿತ್ರದ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ತಿಳಿಸುತ್ತಾರೆ. ಮುಂದಿನ ತಿಂಗಳಲ್ಲಿ ಅಶ್ವಿನಿ ಆಡಿಯೋ ಸಂಸ್ಥೆಯಡಿ ಬಹುದೊಡ್ಡ ಕಾರ್ಯಕ್ರಮದಲ್ಲಿ ಧ್ವನಿಸುರುಳಿ ಬಿಡುಗಡೆ ಹಮ್ಮಿಕೊಂಡಿದ್ದಾರೆ.
ಚಿತ್ರದ ಇನ್ನಿತರ ಹಾಡುಗಳನ್ನು ಪೂರ್ತಿಗೊಳಿಸಲಾಗಿದ್ದು ಮುಂದಿನ ತಿಂಗಳು ಈ ಚಿತ್ರದ ಡಬ್ಬಿಂಗ್ ಹಾಗೂ ಇನ್ನಿತರ ಚಟುವಟಿಕೆಗಳು ರೂಪುಗೊಳ್ಳಲಿದೆ ಎಂದು ನಿರ್ಮಾಣ, ನಿರ್ವಾಹಕರಾದ ದಶಾವರ ಚಂದ್ರು ಅವರು ತಿಳಿಸಿದ್ದಾರೆ.
ವಿ. ಹರಿಕೃಷ್ಣ ಅವರ ಸಂಗೀತ, ನಂದಾ ಅವರ ಛಾಯಾಗ್ರಹಣ ಇರುವ ಈ ಚಿತ್ರದ ನೃತ್ಯ ನಿರ್ದೇಶಕರು ನಾಗೇಶ್. ಸಾಹಸ ನಿರ್ದೇಶಕರು ಮಾಸ್ ಮಾದ. ಸಂಭಾಷಣೆ ನರೇಂದ್ರ ಬಾಬು ಹಾಗೂ ನಂದಕುಮಾರ್.
ತಾರಾಗಣದಲ್ಲಿ ಶಿವರಾಜ್ಕುಮಾರ್, ಸುಮೀತ್ ಕೌರ್ ಅತ್ವಾಳ್, ಪೂಜಾಗಾಂಧಿ, ನವ್ಯ, ಪತ್ರಕರ್ತ ಬಿ.ಗಣಪತಿ, ರವಿಶಂಕರ್, ಗುರುರಾಜ್ ಹೊಸಕೋಟೆ, ಉಮೇಶ್ ಪುಂಗ, ಸುರೇಶ್ ಮಂಗಳೂರ್, ದಶಾವರ ಚಂದ್ರು, ಜಾನ್ ಹಾಗೂ ಇನ್ನಿತರರು ಇದ್ದಾರೆ.